ಅನಾರೋಗ್ಯದ ಸಿಂಹ

This page features a video of the poem “ಅನಾರೋಗ್ಯದ ಸಿಂಹ (Anarogyada Sinha)”, prescribed under the Karnataka State Syllabus for 3rd Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಾಡಿನ ರಾಜ ಸಿಂಹರಾಯನು
ಕಾಯಿಲೆ ಬಿದ್ದನು ಕೇಳಿ ಕಥೆ
ಅನ್ನವು ಸೇರದು ನೀರೂ ಸೇರದು
ರಾಜನಿಗಾಯಿತು ಬಹಳ ವ್ಯಥೆ

ಅಡವಿಯಲಿರುವ ವೈದ್ಯರನ್ನೆಲ್ಲ
ಸರದಿಯಂತೆ ಅವ ಕರೆಸಿದನು
ಡಾಕ್ಟರ್ ಜೀಬ್ರಾ ರಾಜನ ಪರೀಕ್ಷಿಸಿ
ಬಾಯನು ತೆಗೆಯಲು ಹೇಳಿದನು

ವೈದ್ಯರ ಆಜ್ಞೆಯ ಮೀರದ ಸಿಂಹ
ಬಾಯನು ತೆರೆದು ತೋರಿಸಿತು
“ದುರ್ವಾಸನೆಯ ಉಸಿರಿದೆ” ಎಂದು
ಡಾಕ್ಟರ್ ಜೀಬ್ರಾ ಹೇಳಿದನು

ಹೀಗೆ ಹೇಳಲು ಎಂಥ ಧೈರ್ಯ
ಎನ್ನುತ ಸಿಂಹವು ಗರ್ಜಿಸಿತು
ಸತ್ಯವ ಹೇಳಿದ ವೈದ್ಯನನು
ಬೈದು ಹೊರಗಡೆ ಓಡಿಸಿತು

ಮುಂದಿನ ಸರದಿ ಡಾ. ಹೈನಾ
ಸಿಂಹದ ಬಾಗಿಲು ತಟ್ಟಿದಳು
ನಾಡಿಯ ಹಿಡಿದು ನೋಡಿದ ನಂತರ
ಬಾಯನು ತೆರೆಯಲು ಹೇಳಿದಳು

“ಎಂತಹ ಸುವಾಸನೆ ನಿಮ್ಮ ಉಸಿರಲಿ”
ಎನುತ ಮುಖವನು ನೋಡಿದಳು
ಸಿಂಹಕೆ ಕೋಪವು ನೆತ್ತಿಗೆ ಏರಿ
“ಮುಖಸ್ತುತಿ ಮಾಡುವಿ”ಎಂದಿತು

ಇರುವ ಸತ್ಯವ ಹೇಳಲು ಹೆದರಿದ
ಹೈನಾಳನು ಹೊರ ಹಾಕಿಸಿತು
ನಂತರ ಸರದಿ ಜಾಣವೈದ್ಯ ನರಿ
ಬಾಗಿಲು ತಟ್ಟಿ ಒಳಬಂದಿತು

ಸಾರ್ವಭೌಮರ ಉಪಚರಿಸುತ್ತ
ಬಾಯನು ತೆರೆಯಲು ವಿನಂತಿಸಿತು
“ಉಸಿರನು ಕುರಿತು ಏನು ಹೇಳುವಿರಿ”
ಎನ್ನುತ ಬಾಯನು ತೆರೆಯಿತು.

ಚಾಣಾಕ್ಷ ನರಿಯು ತಕ್ಷಣ ಹೇಳಿತು
“ಶೀತದಿ ಮೂಗು ಕಟ್ಟಿದೆ ಒಡೆಯ
ವಾಸನೆ ಏನು ತಿಳಿಯದು ನನಗೆ”
ಎನ್ನುತ ಕೇಳಿತು ಕ್ಷಮೆಯನು

ಸಿಂಹದ ಕೋಪಕೆ ಬಲಿಯಾಗದೆ
ಪಾರಾಯಿತು ನರಿಯು
'ಉಪಾಯ ಬಲ್ಲವನಿಗೆ
ಅಪಾಯವಿಲ್ಲ' ಎನ್ನುವುದೆ ನೀತಿಯು
Summary
ಈ ಕಥೆಯಲ್ಲಿ ಕಾಡಿನ ರಾಜ ಸಿಂಹರಾಯನು ಅನಾರೋಗ್ಯಕ್ಕೆ ಒಳಗಾಗಿ ಊಟ ಮತ್ತು ನೀರು ತೆಗೆದುಕೊಳ್ಳಲಾಗದೆ ದುಃಖಪಡುತ್ತಾನೆ. ಅವನು ಕಾಡಿನ ವೈದ್ಯರನ್ನು ಒಬ್ಬೊಬ್ಬರಾಗಿ ಕರೆಸಿ ತನ್ನ ಆರೋಗ್ಯವನ್ನು ಪರೀಕ್ಷಿಸಿಕೊಳ್ಳುತ್ತಾನೆ. ಜೀಬ್ರಾ ವೈದ್ಯನು ಸಿಂಹನ ಬಾಯಿಯಿಂದ ದುರ್ವಾಸನೆ ಬರುತ್ತಿದೆ ಎಂದು ಸತ್ಯ ಹೇಳಿದಾಗ ಸಿಂಹ ಕೋಪಗೊಂಡು ಅವನನ್ನು ಹೊರಹಾಕುತ್ತದೆ. ಹೈನಾ ವೈದ್ಯೆ ಸಿಂಹನನ್ನು ಮೆಚ್ಚಿಸಲು ಸುಗಂಧದ ಉಸಿರು ಇದೆ ಎಂದು ಸುಳ್ಳು ಹೇಳಿದರೂ ಸಿಂಹ ಅವಳನ್ನು ಮುಖಸ್ತುತಿ ಮಾಡುತ್ತಿದ್ದಾಳೆ ಎಂದು ಕೋಪದಿಂದ ಹೊರಹಾಕುತ್ತದೆ. ಕೊನೆಗೆ ಜಾಣ ನರಿ ಮೂಗು ಕಟ್ಟಿದೆ ಎಂದು ಹೇಳಿ ಸತ್ಯವನ್ನು ತಪ್ಪಿಸಿ ಅಪಾಯದಿಂದ ಪಾರಾಗುತ್ತದೆ, ಮತ್ತು ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ ಎಂಬ ನೀತಿಯನ್ನು ಕಥೆ ತಿಳಿಸುತ್ತದೆ.
Author
ಕವಿ: ಅರುಣ ನರೇಂದ್ರ ಪಾಟೀಲ