ಹುತ್ತರಿ ಹಾಡು

This page features a video of the poem “ಹುತ್ತರಿ ಹಾಡು (Huttari Hadu)”, prescribed under the Karnataka State Syllabus for 7th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?

ಅಲ್ಲೆ ಆ ಕಡೆ ನೋಡಲಾ!
ಅಲ್ಲೆ ಕೊಡಗರ ನಾಡಲಾ
ಅಲ್ಲೆ ಕೊಡವರ ಬೀಡಲಾ!

ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು?
ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು?
ಸವರಿ ಆನೆಯ ಸೊಂಡಲಿನ ರಣಕೊಂಬನಾರ್ ಭೋರ್ಗರೆದರೋ?
ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ?

ಅವರು ಸೋಲ್ ಸಾವರಿಯರು!
ಅವರು ಕಡುಗಲಿ ಗರಿಯರು!
ಅವರೆ ಕೊಡಗಿನ ಹಿರಿಯರು!

ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್
ಹೆಮ್ಮೆಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್
ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು
ಧರ್ಮದಾನವ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು

ನಮ್ಮ ಕೊಡಗಿದು ಜಮ್ಮದು;
ಜಮ್ಮ ಕೊಡಗಿದು ನಮ್ಮದು;
ನಮ್ಮೊಡಲ್ ಬಿಡಲಮ್ಮದು !

ಇದು ಅಗಸ್ತ್ಯನ ತಪದ ಮನೆ, ಕಾವೇರಿ ತಾಯ ತವರ್ಮನೆ,
ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದರವರ್ಮನೆ!
ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು
ಇದೊ! ಇದೊ! ಇಲ್ಲರುಳ್ದ ಹಾಲೇರಿಯರ ಬಲಗಿರಿಶೃಂಗವು

ವಿಧಿಯ ಮಾಟದ ಕೊಡಗಿದು
ಮೊದಲೆ ನಮ್ಮದು, ಕಡೆಗಿದು
ಕದಲದೆಮ್ಮನು; ಬೆಡಗಿದು.

ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?
ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!
ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!
ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!

ನೆಮ್ಮದಿಯನಿದು ತಾಳಲಿ
ಅಮ್ಮೆಯಾ ಬಲತೋಳಲಿ
ನಮ್ಮ ಕೊಡಗಿದು ಬಾಳಲಿ
Summary
ಈ ಕವನವು ಕೊಡಗಿನ ನಾಡಿನ ಪ್ರಕೃತಿ ಸೌಂದರ್ಯ, ವೀರ ಪರಂಪರೆ ಮತ್ತು ಜನರ ನಾಡಾಭಿಮಾನವನ್ನು ಕೊಂಡಾಡುತ್ತದೆ. ಕಾವೇರಿ ನದಿ, ಬೆಟ್ಟಗಳು, ಹಸಿರು ಪರಿಸರ ಮತ್ತು ಕೊಡಗಿನ ವಿಶಿಷ್ಟ ನೆಲದ ಸೊಬಗನ್ನು ಕವಿ ಮನಮೋಹಕವಾಗಿ ಚಿತ್ರಿಸುತ್ತಾನೆ. ಕೊಡಗಿನ ವೀರರು ಸಾಹಸ, ಧೈರ್ಯ ಮತ್ತು ಸ್ವಾಭಿಮಾನದಿಂದ ತಮ್ಮ ನಾಡನ್ನು ರಕ್ಷಿಸಿದವರಾಗಿ ಕವನದಲ್ಲಿ ಕಾಣಿಸುತ್ತಾರೆ. ತಮ್ಮ ನಾಡನ್ನು ದಾಸ್ಯದ ನೊಗಕ್ಕೆ ಬಗ್ಗಿಸದೆ ಒಗ್ಗಟ್ಟು ಮತ್ತು ಧರ್ಮನಿಷ್ಠೆಯಿಂದ ಬದುಕಿದ ಹಿರಿಯರನ್ನು ಕವಿ ಸ್ಮರಿಸುತ್ತಾನೆ. ಕೊಡಗು ನಮ್ಮದು ಎಂಬ ಹೆಮ್ಮೆಯೊಂದಿಗೆ ಜನರು ಒಂದಾಗಿ, ತಮ್ಮ ನಾಡಿನ ಶಾಂತಿ ಮತ್ತು ಸಮೃದ್ಧಿಯನ್ನು ಕಾಪಾಡಬೇಕು ಎಂಬುದು ಕವನದ ಆಶಯವಾಗಿದೆ.
Author
ಕವಿ: ಎಲ್. ಕೆ. ಕಂಬಾರ