ಬೊಮ್ಮನಹಳ್ಳಿಯ ಕಿಂದರಿಜೋಗಿ

This page features a video of the poem “ಬೊಮ್ಮನಹಳ್ಳಿಯ ಕಿಂದರಿಜೋಗಿ (Bommanahalliya Kindarijogi)”, prescribed under the Karnataka State Syllabus for 9th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಮರುಮಾತಾಡದೆ ಕಿಂದರಿಜೋಗಿ
ಕಟ್ಟೆಯನಿಳಿದನು ಬೀದಿಗೆ ಹೋಗಿ
ಗಡ್ಡವ ನೀವುತ ಸುತ್ತಲು ನೋಡಿ
ಮಂತ್ರವ ಬಾಯಲಿ ಮಣಮಣ ಹಾಡಿ
ಕಿಂದರಿ ಬಾರಿಸತೊಡಗಿದನು,
ಜಗವನೆ ಮೋಹಿಸಿತಾ ನಾದ!

ಏನಿದು? ಏನಿದು ಗಜಿಬಿಜಿ ಎಲ್ಲಿ?
ಊರನೆ ಮುಳುಗಿಪ ನಾದವಿದೆಲ್ಲಿ?
ಇಲಿಗಳು! ಇಲಿಗಳು! ಇಲಿಗಳ ಹಿಂಡು!
ಬಳಬಳ ಬಂದುವು ಇಲಿಗಳ ದಂಡು!
ಅನ್ನದ ಮಡಕೆಯನಗಲಿದುವು!
ಟೋಪಿಯ ಗೂಡನು ತ್ಯಜಿಸಿದುವು!
ಬಂದುವು ಅಂಗಿಯ ಜೇಬನು ಬಿಟ್ಟು,
ಮಕ್ಕಳ ಕಾಲಿನ ಚೀಲವ ಬಿಟ್ಟು
ಹಾರುತ ಬಂದುವು, ಓಡುತ ಬಂದುವು,
ನೆಗೆಯುತ ಬಂದುವು, ಕುಣಿಯುತ ಬಂದುವು,
ಜೋಗಿಯು ಬಾರಿಸೆ ಕಿಂದರಿಯ.

ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ
ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ,
ಮಾವಿಲಿ, ಭಾವಿಲಿ, ಅಕ್ಕಿಲಿ, ತಂಗಿಲಿ,
ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ
ಎಲ್ಲಾ ಬಂದುವು ಓಡೋಡಿ,
ಜೋಗಿಯು ಬಾರಿಸೆ ಕಿಂದರಿಯ!

ಬಂದುವು ನಾನಾ ಬಣ್ಣದ ಇಲಿಗಳು
ಕೆಂಪಿನ ಇಲಿಗಳು, ಹಳದಿಯ ಇಲಿಗಳು,
ಬೆಳ್ಳಿಲಿ, ಕರಿಯಿಲಿ, ಗಿರಿಯಿಲಿ, ಹೊಲದಿಲಿ,
ಕುಂಕುಮರಾಗದ, ಚಂದನರಾಗದ,
ಹಸುರಿನ ಬಣ್ಣದ, ಪಚ್ಚೆಯ ವರ್ಣದ,
ಸಂಜೆಯ ರಾಗದ, ಗಗನದ ರಾಗದ,
ನಾನಾ ವರ್ಣದ ಇಲಿಗಳು ಬಂದುವು,
ಕುಣಿಯುತ ನಲಿಯುತ ಸಂತಸದಿ
ಜೋಗಿಯು ಬಾರಿಸೆ ಕಿಂದರಿಯ!

ನೋಡಿರಿ! ಕಾಣಿರಿ! ಬರುತಿಹವಿನ್ನೂ!
ಅಟ್ಟದ ಮೇಲಿಂ ಬರುವುವು ಕೆಲವು,
ಕಣಜದ ಕಡೆಯಿಂ ಬರುವುವು ಕೆಲವು!
ಓಹೋ ! ಬಂದುವು ಹಿಂಡ್ಹಿಂಡಾಗಿ!
ಕುಂಟಿಲಿ, ಕಿವುಡಿಲಿ, ಹೆಳವಿಲಿ, ಮೂಗಿಲಿ,
ಚೀ! ಪೀ! ಎನ್ನುತ ಕೂಗುತಲೋಡಿ
ಗಹಗಹಿಸುತ ನೆರೆ ನಲಿನಲಿದಾಡಿ
ಬಂದಿತು ಮೂಷಿಕಸಂಕುಲವು
ಜೋಗಿಯು ಬಾರಿಸೆ ಕಿಂದರಿಯ!

ಬೊಮ್ಮನಹಳ್ಳಿಯ ಕಿಂದರಿಜೋಗಿ
ಹೊರಟನು ತುಂಗಾನದಿಯೆಡೆಗಾಗಿ
ಕಿಂದರಿನಾದವು ಗಗನಕ್ಕೇರಿತು
ಇಲಿಗಳನೆಲ್ಲಾ ಮನಮೋಹಿಸಿತು!
ಕಿಂದರಿಜೋಗಿಯ ಹಿಂಬಾಲಿಸಿದರ
ಜನಗಳು ನೋಡಲು ಕೌತುಕವ.

ಜೋಗಿಯು ನಡೆದನು, ಇಲಿಗಳು ನಡೆದುವು,
ಸೇರಿದರೆಲ್ಲರು ನದಿಯೆಡೆಯ,
ಹೊಳೆಯಾ ಮರಳಿನ ಗುಡ್ಡೆಯ ತುಂಬಾ
ನೋಡಿದರೆಲ್ಲಿಯು ಮೂಷಿಕಗುಂಪೇ!
ಉಸಿರಾಡದೆ ನಿಂತರು ಜನರೆಲ್ಲಾ
ಮುಂದೇನಾಗುವುದೆಂದಲ್ಲಿ!
ದಿವಿಜರು ಕವಿದರು ಗಗನದಲಿ
ಹೂಮಳೆ ಕರೆದರು ಹರುಷದಲಿ,
ದುಂದುಭಿನಾದವ ಮಾಡಿದರು,
ಕಾಣದ ಬೆರಗನು ನೋಡಿದರು!

ಸುತ್ತಲು ನೋಡಿದ ಕಿಂದರಿಜೋಗಿ
ನಡೆದನು ಹೊಳೆಯಾ ನೀರಿನ ಮೇಲೆ!
ಸೇರಿದ ಜನರೆಲ್ಲರು ಬೆರಗಾಗಿ,
“ಜಯಜಯ ಜೋಗೀ!” ಎಂದರು ಕೂಗಿ!
ಇಲಿಗಳು ಒಂದರ ಮೇಲೊಂದು
ಹಿಂಬಾಲಿಸಿದುವು ಜೋಗಿಯನು,
ಬುಳುಬುಳು ನೀರೊಳು ಮುಳುಗಿದುವೆಲ್ಲಾ
ಹೆಣವಾಗಲ್ಲಿಯೆ ತೇಲಿದುವು.
Summary
Kannada Summary
ಈ ಕವನವು ಕಿಂದರಿಜೋಗಿ ಬೀದಿಯಲ್ಲಿ ಕಿಂದರಿ ಬಾರಿಸುವುದರಿಂದ ಉಂಟಾಗುವ ಜೀವಂತ ಮತ್ತು ಮಾಯಾಮಯ ಘಟನೆಯನ್ನು ವರ್ಣಿಸುತ್ತದೆ. ಅವನ ಸಂಗೀತಕ್ಕೆ ಆಕರ್ಷಿತರಾದ ವಿವಿಧ ಗಾತ್ರ, ಬಣ್ಣ ಮತ್ತು ಬಗೆಯ ಇಲಿಗಳ ದೊಡ್ಡ ಗುಂಪುಗಳು ಮನೆಗಳು ಮತ್ತು ಇತರ ಸ್ಥಳಗಳಿಂದ ಹೊರಬಂದು ಅವನನ್ನು ಹಿಂಬಾಲಿಸುತ್ತವೆ. ಇಲಿಗಳ ಚಲನವಲನಗಳನ್ನು ಚಟುವಟಿಕೆ, ಗದ್ದಲ ಮತ್ತು ಹಾಸ್ಯಭರಿತವಾಗಿ ವರ್ಣಿಸುವುದರಿಂದ ಕವನದಲ್ಲಿ ರೋಚಕ ದೃಶ್ಯ ಮೂಡುತ್ತದೆ. ಕಿಂದರಿಜೋಗಿ ಇಲಿಗಳನ್ನು ತುಂಗಾನದಿಯ ಕಡೆಗೆ ಕರೆದೊಯ್ಯುತ್ತಾನೆ ಮತ್ತು ಜನರು ಕುತೂಹಲದಿಂದ ಅವರ ಹಿಂದೆ ಸಾಗುತ್ತಾರೆ. ನದಿಯ ಬಳಿ ಇಲಿಗಳಿಗೆ ಸಂಭವಿಸಿದ ವಿಚಿತ್ರ ಅಂತ್ಯವನ್ನು ಕಂಡು ಜನರು ಬೆರಗಾಗುತ್ತಾರೆ ಮತ್ತು ಕಿಂದರಿಜೋಗಿಯ ಸಂಗೀತದ ಶಕ್ತಿಯನ್ನು ಆಶ್ಚರ್ಯದಿಂದ ನೋಡುತ್ತಾರೆ.

670
Author
ಕವಿ: ಕುವೆಂಪು