ಭಗೀರಥ

This page features a video of the lesson “ಭಗೀರಥ (Bhagiratha)”, prescribed under the Karnataka State Syllabus for 3rd Standard Kannada First Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics Kannada
ಪುರಾಣಕಾಲದಲ್ಲಿ ಭಗೀರಥ ಎಂಬ ದೊರೆ ಇದ್ದನು. ಅವನ ಅರವತ್ತು ಸಾವಿರ ಜನ
ತಾತಂದಿರು ಕಪಿಲ ಮುನಿಯ ಕೋಪಕ್ಕೆ ಸಿಕ್ಕಿ ಸುಟ್ಟು ಭಸ್ಮವಾಗಿದ್ದರು. ಅವರಿಗೆ ಸ್ವರ್ಗ
ಲಭಿಸಬೇಕೆಂದು ಭಗೀರಥನು ಚಿಂತಿಸುತ್ತಿದ್ದನು. ಅದಕ್ಕೆ ದೇವಲೋಕದ ಗಂಗೆಯನ್ನು ಭೂಮಿಗೆ
ತಂದು, ಅವನ ತಾತಂದಿರ ಬೂದಿಯ ಮೇಲೆ ಹರಿಸಬೇಕೆಂದು ಜ್ಞಾನಿಗಳಾದ ಋಷಿಗಳು
ಹೇಳಿದರು.

ದೇವಲೋಕದ ಗಂಗೆಯನ್ನು ಭೂಮಿಗೆ ತರುವುದು ಅಸಾಧ್ಯವಾದ ಕೆಲಸವಾಗಿತ್ತು.
ಆದರೆ ಭಗೀರಥ ತನ್ನ ನಿರ್ಧಾರದಿಂದ ಎಳ್ಳಷ್ಟು ಹಿಂದೆ ಸರಿಯಲಿಲ್ಲ. ಎಷ್ಟೇ ಕಷ್ಟವಾದರೂ
ಗಂಗೆಯನ್ನು ಭೂಮಿಗೆ ತಂದೇ ತರುತ್ತೇನೆಂದು ತಪಸ್ಸಿಗೆ ಕುಳಿತ. ಬಾಯಾರಿಕೆ, ಹಸಿವು,
ನಿದ್ರೆಯನ್ನು ಮರೆತ. ಬಿಸಿಲು, ಮಳೆ, ಬಿರುಗಾಳಿಯನ್ನು ಸಹಿಸಿಕೊಂಡ.
ಅನೇಕ ವರ್ಷಗಳ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷಳಾದ ಗಂಗೆ “ನಿನ್ನ ಇಚ್ಛೆಯಂತೆ
ನಾನು ಭೂಮಿಗೆ ಧುಮುಕುತ್ತೇನೆ. ಆದರೆ, ನನ್ನ ರಭಸವನ್ನು ತಡೆಯುವವರು ಯಾರು?”
ಎಂದಳು.

ಚಿಂತಾಕ್ರಾಂತನಾದ ಭಗೀರಥ ಮತ್ತೆ ತಪಸ್ಸಿಗೆ ಕುಳಿತ. ಆಗ ಅವನಿಗೆ ಬ್ರಹ್ಮದೇವ
ಪ್ರತ್ಯಕ್ಷನಾದ. ಭಗೀರಥನ ಪ್ರಾರ್ಥನೆಗೆ ಬ್ರಹ್ಮದೇವನು ಮೆಚ್ಚಿ, ಶಿವನನ್ನು ಕುರಿತು ತಪಸ್ಸು
ಮಾಡು ಎಂದು ಸಲಹೆ ನೀಡಿದ. ಅದರಂತೆ ಭಗೀರಥ ತಪಸ್ಸನ್ನು ಮುಂದುವರಿಸಿದ.
ಅವನ ಕಠಿಣ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವ “ನಿನ್ನ ಧೈರ್ಯ, ಭಕ್ತಿ, ದೃಢಸಂಕಲ್ಪವನ್ನು
ಮೆಚ್ಚಿದ್ದೇನೆ. ಧುಮ್ಮಿಕ್ಕುವ ಗಂಗೆಯನ್ನು ತಡೆದು ನಾನು ಶಿರದಲ್ಲಿ ಧರಿಸುತ್ತೇನೆ. ಗಂಗೆ
ನನ್ನ ಶಿರದಿಂದ ಭೂಮಿಗೆ ಇಳಿದು, ನಿನ್ನನ್ನು ಹಿಂಬಾಲಿಸುವಳು” ಎಂದನು.

ಅಂತೆಯೇ ಭೋರ್ಗರೆಯುತ್ತ ಧುಮ್ಮಿಕ್ಕಿದ ಗಂಗೆಯನ್ನು ಶಿವನು ಜಟೆಯಲ್ಲಿ ತಡೆದು
ಭೂಮಿಗೆ ಹರಿಯಬಿಟ್ಟನು. ಗಂಗೆ ರಭಸದಿಂದ ಹರಿಯುವಾಗ ಜಹ್ನು ಮಹರ್ಷಿಯ
ಆಶ್ರಮ ಕೊಚ್ಚಿಕೊಂಡು ಹೋಯಿತು. ಇದರಿಂದ ಕೋಪಗೊಂಡ ಮಹರ್ಷಿಯು
ಗಂಗೆಯನ್ನು ಒಂದೇ ಗುಟುಕಿಗೆ ಕುಡಿದು ಬಿಟ್ಟನು.

ಇಷ್ಟೆಲ್ಲಾ ಪ್ರಯತ್ನಗಳ ನಂತರವೂ ಗಂಗೆ ಸಿಗಲಿಲ್ಲ. ಆದರೂ ಭಗೀರಥ ಎದೆಗುಂದದೆ,
ಜಹ್ನು ಮಹರ್ಷಿಯನ್ನು ತನ್ನ ಪ್ರಾರ್ಥನೆಯಿಂದ ಮೆಚ್ಚಿಸಿದ. ತನ್ನ ಪಿತೃಗಳ ಸದ್ಗತಿಗಾಗಿ
ಭಗೀರಥ ಮಾಡುತ್ತಿರುವ ಪ್ರಯತ್ನವನ್ನು ಮೆಚ್ಚಿ ಮಹರ್ಷಿ, ಗಂಗೆಯನ್ನು ತನ್ನ ಕಿವಿಯಿಂದ
ಹರಿಯಲು ಬಿಟ್ಟನು.

ಅಂತೂ ಭಗೀರಥ ಗಂಗೆಯನ್ನು ಭೂಮಿಗೆ ತರಲು ಮಾಡಿದ ಸಾಹಸಕ್ಕೆ ಫಲ
ದೊರೆಯಿತು. ಭಗೀರಥನ ಪ್ರಾರ್ಥನೆಯನ್ನು ಮನ್ನಿಸಿ ಹಿಂಬಾಲಿಸಿದ ಗಂಗೆ ಹರಿದು
ಅವನ ತಾತಂದಿರ ಬೂದಿಯನ್ನು ತೊಯ್ದಳು. ಅವರಿಗೆ ಸ್ವರ್ಗ ಲಭಿಸಿತು. ಎಷ್ಟೇ ಅಡ್ಡಿ
ಆತಂಕಗಳು ಬಂದರೂ, ಭಗೀರಥ ಎದೆಗುಂದದೆ ತನ್ನ ದೃಢಸಂಕಲ್ಪದಿಂದ ಅಂದುಕೊಂಡ
ಕಾರ್ಯ ಸಾಧಿಸಿದ.
Summary
ಭಗೀರಥನು ತನ್ನ ಅರವತ್ತು ಸಾವಿರ ತಾತಂದಿರಿಗೆ ಸದ್ಗತಿ ದೊರಕಿಸಬೇಕೆಂದು ಗಂಗೆಯನ್ನು ಭೂಮಿಗೆ ತರಲು ಸಂಕಲ್ಪ ಮಾಡಿದನು. ತನ್ನ ಗುರಿಯನ್ನು ಸಾಧಿಸಲು ಅವನು ಅನೇಕ ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ, ಹಸಿವು, ಬಾಯಾರಿಕೆ, ಬಿಸಿಲು, ಮಳೆ ಮತ್ತು ಬಿರುಗಾಳಿಯನ್ನು ಸಹಿಸಿಕೊಂಡನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮದೇವ ಮತ್ತು ಶಿವನು ಸಹಾಯ ಮಾಡಿದರು, ಹಾಗೂ ಶಿವನು ತನ್ನ ಜಟೆಯಲ್ಲಿ ಗಂಗೆಯ ರಭಸವನ್ನು ತಡೆದು ಭೂಮಿಗೆ ಹರಿಯುವಂತೆ ಮಾಡಿದನು. ನಂತರ ಜಹ್ನು ಮಹರ್ಷಿಯ ಕೋಪದಿಂದ ಗಂಗೆ ಮತ್ತೆ ಅಡ್ಡಿಯಾದರೂ, ಭಗೀರಥನು ತನ್ನ ಪ್ರಾರ್ಥನೆ ಮತ್ತು ದೃಢಸಂಕಲ್ಪದಿಂದ ಮಹರ್ಷಿಯನ್ನು ಮೆಚ್ಚಿಸಿ ಗಂಗೆಯನ್ನು ಮುಂದುವರಿಯುವಂತೆ ಮಾಡಿದನು. ಕೊನೆಗೆ ಗಂಗೆ ಭಗೀರಥನನ್ನು ಹಿಂಬಾಲಿಸಿ ಅವನ ತಾತಂದಿರ ಬೂದಿಯನ್ನು ತೊಯ್ದಳು ಮತ್ತು ಅವರಿಗೆ ಸ್ವರ್ಗ ಲಭಿಸಿತು. ಈ ಕಥೆಯು ಎಷ್ಟೇ ಕಷ್ಟಗಳು ಮತ್ತು ಅಡ್ಡಿಗಳು ಎದುರಾದರೂ ಧೈರ್ಯ, ಭಕ್ತಿ, ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಗುರಿಯನ್ನು ಸಾಧಿಸಬಹುದು ಎಂಬ ಸಂದೇಶವನ್ನು ನೀಡುತ್ತದೆ.
Author