ಮೆದುಮಾತು

This page features a video of the lesson “ಮೆದುಮಾತು (Medumatu)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics Kannada
ವ್ಯಾಪಾರಿಯೊಬ್ಬ ಸಂತೆಗೆಂದು ಸಾಮಾನುಗಳನ್ನು ಟೆಂಪೋದಲ್ಲಿ ತುಂಬಿಕೊಂಡು
ಹೊರಟಿದ್ದನು. ಮಳೆ ಬಂದು ರಸ್ತೆ ಬಲು ಕೆಟ್ಟು ಹೋಗಿತ್ತು. ಮಾರ್ಗ ಮಧ್ಯದ ಕೆಸರಿನಲ್ಲಿ
ಟೆಂಪೋದ ಒಂದು ಚಕ್ರವು ಹೂತು ಹೋಯಿತು. ವ್ಯಾಪಾರಿ ಟೆಂಪೋದಿಂದ ಕೆಳಗಿಳಿದು
ಯಾರಾದರೂ ಇತ್ತ ಬರುವರೇ ಎಂದು ನೋಡಿದನು. ದೂರದಲ್ಲಿ ಒಬ್ಬ ಯುವಕ
ಹೋಗುತ್ತಿದ್ದ. ವ್ಯಾಪಾರಿ ಗಟ್ಟಿಯಾಗಿ “ಲೋ, ಬಾರೋ ಈ ಕಡೆ” ಎಂದನು.

‘ಯಾರಪ್ಪ ನನ್ನನ್ನು ಈ ಥರ ಕರೆಯೋದು?’ ಎಂದುಕೊಂಡು ಯುವಕ ತಿರುಗಿ
ನೋಡಿದ. ವ್ಯಾಪಾರಿ ದರ್ಪದಿಂದ “ಏನೋ, ಹಾಗೆ ನೋಡ್ತೀಯಾ? ಚಕ್ರ ಹೂತು
ಹೋಗಿರೋದು ಕಾಣಿಸೋದಿಲ್ವೆ? ಬಾ, ಸ್ವಲ್ಪ ಚಕ್ರ ಎತ್ತು. ನಾನು ಗಾಡಿ ಚಾಲು ಮಾಡ್ತೇನೆ”
ಎನ್ನುತ್ತ ಟೆಂಪೋ ಹತ್ತಿದನು. ಆತನ ಮಾತಿನ ಧಾಟಿ ಯುವಕನಿಗೆ ಹಿಡಿಸಲಿಲ್ಲ.
ಆತ ಸಿಟ್ಟಿನಿಂದ, “ನೀನೇ ಎತ್ತಿಕೋ, ನಾನೇಕೆ ಎತ್ತಲಿ?” ಎನ್ನುತ್ತ ಮುಂದಕ್ಕೆ
ನಡೆದನು.
ಆ ದಾರಿಯಲ್ಲಿ ಬರುತ್ತಿದ್ದ ರಾಮಪ್ಪ ಮಾಸ್ತರರು ಇವರಿಬ್ಬರ ಮಾತುಗಳನ್ನು
ಆಲಿಸಿ, ವ್ಯಾಪಾರಿಗೆ ಹೇಳಿದರು : “ನೋಡ್ರಿ ಯಜಮಾನರೇ, ಯಾರೇ ಆಗಲಿ
ಗೌರವ ಕೊಟ್ಟು ಮಾತನಾಡಿಸಬೇಕು. ಆ ಹುಡುಗನನ್ನು ಮಾತನಾಡಿಸಿದ ರೀತಿ ಸರಿ
ಎಂದು ಅನಿಸುತ್ತಿದೆಯೇ ನಿಮಗೆ? ಅವನನ್ನು ಪ್ರೀತಿಯಿಂದ ಮಾತನಾಡಿಸಿರಿ, ಆಗ
ನಿಮ್ಮ ಕೆಲಸಕ್ಕೆ ಆತ ಸಹಾಯ ಮಾಡೇ ಮಾಡ್ತಾನೆ” ಎಂದರು.

ಮಾಸ್ತರ್ ಹೇಳಿದ ಮಾತಿನಿಂದ ವ್ಯಾಪಾರಿಗೆ ತಪ್ಪಿನ ಅರಿವಾಯಿತು. ಆತ
ಯುವಕನಿಗೆ, “ತಮ್ಮಾ, ದಯಮಾಡಿ ಕ್ಷಮಿಸು, ಟೆಂಪೋದ ಚಕ್ರ ಎತ್ತಲು ಸಹಾಯ
ಮಾಡುವೆಯಾ ಎಂದು ಕೇಳಿಕೊಂಡ. ಅಷ್ಟರಲ್ಲಿ ಮಾಸ್ತರರು "ಈ ಮಾತನ್ನು
ಮೊದಲೇ ಹೇಳಬಹುದಿತ್ತಲ್ಲ? ಬಾಪ್ಪ ಗೆಳೆಯ, ಇವರಿಗೆ ಸ್ವಲ್ಪ ಸಹಾಯ ಮಾಡೋಣ”
ಎನ್ನುತ್ತ ಯುವಕನನ್ನು ಕರೆದು, ತಾವೂ ಮುಂದೆ ಬಂದರು.
ಯುವಕನೂ ಮಾಸ್ತರರೂ ಸೇರಿಕೊಂಡು ವ್ಯಾಪಾರಿಯ ಟೆಂಪೋದ ಚಕ್ರವನ್ನು
ಮೇಲಕ್ಕೆತ್ತಿದರು. ಮಾಸ್ತರರ ಮಾತಿನಲ್ಲಿದ್ದ ಆತ್ಮೀಯತೆ ಎಲ್ಲರ ಮನಸ್ಸನ್ನು ಗೆದ್ದಿತು.
ವ್ಯಾಪಾರಿಯೂ ಟೆಂಪೋವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕೆಳಗೆ ಇಳಿದು ಬಂದು
ಯುವಕನ ಕೈಕುಲುಕಿದನು. ಮಾಸ್ತರರಿಗೆ ಧನ್ಯವಾದ ಹೇಳಿದನು.
Summary
ಒಬ್ಬ ವ್ಯಾಪಾರಿ ಸಂತೆಗೆ ಸಾಮಾನುಗಳನ್ನು ತೆಗೆದುಕೊಂಡು ಟೆಂಪೋದಲ್ಲಿ ಹೋಗುತ್ತಿದ್ದನು. ಮಳೆಯಿಂದ ರಸ್ತೆ ಕೆಸರುಮಯವಾಗಿ ಟೆಂಪೋದ ಒಂದು ಚಕ್ರ ಕೆಸರಿನಲ್ಲಿ ಹೂತುಹೋಯಿತು. ದಾರಿಯಲ್ಲಿ ಹೋಗುತ್ತಿದ್ದ ಯುವಕನಿಗೆ ವ್ಯಾಪಾರಿ ದರ್ಪದಿಂದ ಸಹಾಯ ಕೇಳಿದ ಕಾರಣ ಯುವಕನು ಸಹಾಯ ಮಾಡಲು ನಿರಾಕರಿಸಿದನು. ಈ ಘಟನೆಯನ್ನು ಗಮನಿಸಿದ ರಾಮಪ್ಪ ಮಾಸ್ತರರು ಎಲ್ಲರನ್ನೂ ಗೌರವದಿಂದ ಮತ್ತು ಪ್ರೀತಿಯಿಂದ ಮಾತನಾಡಿಸಬೇಕು ಎಂದು ವ್ಯಾಪಾರಿಗೆ ತಿಳಿಸಿದರು. ಮಾಸ್ತರರ ಮಾತಿನಿಂದ ತನ್ನ ತಪ್ಪನ್ನು ಅರಿತ ವ್ಯಾಪಾರಿ ಯುವಕನಲ್ಲಿ ಕ್ಷಮೆ ಕೇಳಿ ವಿನಯದಿಂದ ಸಹಾಯ ಮಾಡುವಂತೆ ಕೇಳಿಕೊಂಡನು. ಮಾಸ್ತರರು ಮತ್ತು ಯುವಕ ಸೇರಿ ಟೆಂಪೋದ ಚಕ್ರವನ್ನು ಮೇಲಕ್ಕೆತ್ತಿ ವ್ಯಾಪಾರಿಗೆ ಸಹಾಯ ಮಾಡಿದರು. ಈ ಘಟನೆಯಿಂದ ಗೌರವದಿಂದ ಮಾತನಾಡುವುದು ಮತ್ತು ಆತ್ಮೀಯತೆಯಿಂದ ವರ್ತಿಸುವುದು ಎಲ್ಲರ ಮನಸ್ಸನ್ನು ಗೆಲ್ಲುತ್ತದೆ ಎಂಬ ಸಂದೇಶ ದೊರೆಯುತ್ತದೆ.
Author
ಲೇಖಕರು: ಸಂಗ್ರಹ